ಋಣತ್ರಯ
	
ದೇವಋಣ, ಋಷಿಋಣ, ಪಿತೃಋಣವೆಂದು ಮೂರು ಬಗೆಯಾಗಿರುವ ಅಲೌಕಿಕ ಋಣ. ಜೀವನ ನಿರ್ವಹಣೆಗಾಗಿ ಮನುಷ್ಯ ಮಾಡುವ ಸಾಲ ಲೌಕಿಕವಾದುದು. ಇದು ಈ ಲೇಖನದ ವ್ಯಾಪ್ತಿಗೆ ಒಳಪಡದು. ಹುಟ್ಟುವಾಗಲೇ ದೇವತೆಗಳಿಗೂ ಋಷಿಗಳಿಗೂ ಪಿತೃಗಳಿಗೂ ಮನುಷ್ಯ ಋಣಿಯಾಗಿರುತ್ತಾನೆ. ಈ ಮೂರು ಋಣಗಳನ್ನು ತೀರಿಸದ ಹೊರತು ಮೋಕ್ಷ ದೊರೆಯುವುದಿಲ್ಲ ಎಂದು ಶ್ರುತಿ ಉದ್ಘೋಷಿಸುತ್ತದೆ. ಯಜ್ಞಗಳನ್ನು ಮಾಡಿ ದೇವಋಣವನ್ನು ತೀರಿಸಬೇಕು. ಯಜ್ಞ ಮಾಡಲು ಅಶಕ್ತನಾದರೆ ದೇವತಾಪೂಜೆ, ವ್ರತೋಪವಾಸಾದಿಗಳಿಂದ ಇದು ತೀರುತ್ತದೆ. ಬ್ರಹ್ಮಚರ್ಯ ನಿಯಮಪಾಲನೆ, ವೇದಾಧ್ಯಯನ, ಶಾಸ್ತ್ರಾಭ್ಯಾಸ ತಪಸ್ಸುಗಳಿಂದ ಋಷಿಋಣ ತೀರುತ್ತದೆ. ಪುತ್ರಪ್ರಾಪ್ತಿ, ಶ್ರಾದ್ಧ ನಿರ್ವಹಣೆಗಳಿಂದ ಪಿತೃಋಣ ತೀರುತ್ತದೆ.				
	(ಎಸ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ